ಮುಳಬಾಗಲ, ಡಿ ಎನ್
1848-98. ಹತ್ತೊಂಬತ್ತನೆಯ ಶತಮಾನದ ಗಣ್ಯ ಭಾಷಾ ಸೇವಕರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪಕರಲೊಬ್ಬರು. ಸಂಸ್ಕøತ ಮತ್ತು ಕನ್ನಡದಲ್ಲಿ ಪಾಂಡಿತ್ಯಗಳಿಸಿದ್ದ ಇವರ ಪೂರ್ಣ ಹೆಸರು ಧೊಂಡೋ ನರಸಿಂಹ ಮುಳಬಾಗಲ. ಇವರ ಮೂಲಸ್ಥಳ ಕೋಲಾರ ಜಿಲ್ಲೆಯ ಮುಳಬಾಗಲು. ಮುಂಬಯಿ ಸರ್ಕಾರದ ಶಿಕ್ಷಣ ಇಲಾಖೆಯನ್ನು ಸೇರಿ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಕೆಲಸ ಮಾಡಿ 1882ರಲ್ಲಿ ಧಾರವಾಡದ ಸರ್ಕಾರಿ ಶಿಕ್ಷಣ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಉತ್ತರ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯವಿದ್ದ ಕಾಲದಲ್ಲಿ ಕನ್ನಡದ ವ್ಯಾಪಕ ಪ್ರಚಾರಕ್ಕೆ ಬಹುವಾಗಿ ಪ್ರಯತ್ನಿಸಿದರು. ತಮ್ಮ ವೇಣಿ; ಸಂಹಾರ (1885) ನಾಟಕದ ಮುನ್ನುಡಿಯಲ್ಲಿ ದೇಶಭಾಷೆಯ ಆಗಿನ ಪರಿಸ್ಥಿತಿಯನ್ನು ಕುರಿತು ಇವರು ವ್ಯಕ್ತಪಡಿಸಿರುವ ಕಳಕಳಿ ಗಮನಾರ್ಹ. ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ತಾಳಿದ್ದ ಕಾಲದಲ್ಲಿ ಕನ್ನಡದಲ್ಲೂ ಸತ್ತ್ವವಿದೆಯೆಂದು ತೋರಿಸಲು ಇವರು ಹಲವು ಬಗೆಯಲ್ಲಿ ಶ್ರಮಿಸಿದರು.

	ಇವರು ಶೂದ್ರಕ ಕವಿಯ ಮೃಚ್ಛಕಟಿಕ (1889), ಕಾಳಿದಾಸನ ಮಾಳವಿಕಾಗ್ನಿ ಮಿತ್ರ (1894) ಈ ಸಂಸ್ಕøತ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಭಾಷಾಂತರದಲ್ಲಿ ಸ್ವಾತಂತ್ರ್ಯವಹಿಸಿ, ಆ ಕಾಲದ ಬಳಕೆಯ ಸರಳ ಶೈಲಿ ಮತ್ತು ಪಡೆನುಡಿಗಳ ಪದಸರಣಿಯೊಡನೆ ಸ್ವತಂತ್ರ ನಾಟಕಗಳು ಎಂಬಂತೆ ಅನುವಾದಿಸಿದ್ದಾರೆ. ಉತ್ತರ ರಾಮಚರಿತ್ರೆ ನಾಟಕವು, ಕನ್ನಡ ಕೈಪಿಡಿ (ಎರಡು ಭಾಗಗಳಲ್ಲಿ) ಛಂದಸ್ಸಾರ, ನುಡಿಗಟ್ಟು ಎಂಬ ಹೊಸಗನ್ನಡ ಸಂಕ್ಷಿಪ್ತ ವ್ಯಾಕರಣ-ಇವು ಇವರ ಇತರ ಕೃತಿಗಳು. ರಾಜಶೇಖರ ವಿಲಾಸದ ವಿಳನೆಯ ಆಶ್ವಾಸಕ್ಕೆ ಇವರು ಟೀಕೆಯನ್ನೂ ಬರೆದಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ